ಭೂ-ಒಡೆತನ ಯೋಜನೆಯು ನಿಗಮದ ಒಂದು ಪ್ರತಿಷ್ಟಿತ ಯೋಜನೆಯಾಗಿದ್ದು, ಪರಿಶಿಷ್ಟ ಜಾತಿಯ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಮಾತ್ರ ಈ ಯೋಜನೆಯಡಿ ಸೌಲಭ್ಯವನ್ನು ನೀಡಲಾಗುತ್ತಿದೆ.

ಸರ್ಕಾರದ ಆದೇಶ ಸಂಖ್ಯೆ: ಸಕಇ 148 ಎಸ್ ಡಿಸಿ 2017, ಬೆಂಗಳೂರು ದಿನಾಂಕ: 20.04.2017ರಂತೆ 26 ಜಿಲ್ಲೆಗಳಿಗೆ ಘಟಕ ವೆಚ್ಚ ಗರಿಷ್ಟ ರೂ. 15.00 ಲಕ್ಷ ಇದ್ದು, ಉಳಿದ 04 ಜಿಲ್ಲೆಗಳಿಗೆ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ) ಸರ್ಕಾರದ ಆದೇಶ ಸಂಖ್ಯೆ: ಸಕಇ:137:ಎಸ್ ಡಿಸಿ:2018, ಬೆಂಗಳೂರು ದಿನಾಂಕ: 12.09.2018ರಂತೆ ಘಟಕ ವೆಚ್ಚ ರೂ.20.00 ಲಕ್ಷಗಳಿದ್ದು, ಘಟಕ ವೆಚ್ಚದಲ್ಲಿ ಶೇ.50 ಭಾಗ ಸಹಾಯಧನ ಹಾಗೂ ಶೇ.50 ಭಾಗ ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ನೀಡಲಾಗುವುದು.

ಸದರಿ ಘಟಕ ವೆಚ್ಚದ ಮಿತಿಯಲ್ಲಿ ಕನಿಷ್ಠ 2.00 ಎಕರೆ ಖುಷ್ಕಿ ಅಥವಾ ಕನಿಷ್ಠ 1.00 ಎಕರೆ ತರಿ ಅಥವಾ ½ ಎಕರೆ (20 ಗುಂಟೆ) ಕಡಿಮೆಯಿಲ್ಲದಂತೆ ಭಾಗಾಯ್ತು ಜಮೀನನ್ನು ಖರೀದಿಸಿ ಕೊಡಲಾಗುವುದು.

ಫಲಾನುಭವಿಯು ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ 10 ಕಿ.ಮೀ ವ್ಯಾಪ್ತಿಯೊಳಗೆ ಜಮೀನನ್ನು ಫಲಾನುಭವಿಗೆ ಖರೀದಿಸಿ ಕೊಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು ದರ ನಿಗದಿಪಡಿಸುತ್ತದೆ.

ಭೂ ಒಡೆತನ ಯೋಜನೆಯಡಿ ಅವಧಿಸಾಲವನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಮತ್ತು ಅಭಿವೃದ್ದಿ ನಿಗಮದಿಂದ ಮತ್ತು ಸಹಾಯಧನವನ್ನು ವಿಶೇಷ ಕೇಂದ್ರಿಯ ನೆರವು ಯೋಜನೆ ಅನುದಾನ ದಿಂದ ಭರಿಸಲಾಗುತ್ತಿದೆ. ಈ ಯೋಜನೆಯಡಿ ಫಲಾಪೇಕ್ಷಿಗಳಿಗೆ ಸೌಲಭ್ಯ ಕಲ್ಪಿಸಲು ವಿಧಾನಸಭಾ ಕ್ಷೇತ್ರವಾರು ಪರಿಶಿಷ್ಟ ಜಾತಿಯ ಜನಸಂಖ್ಯೆ ಆಧಾರದ ಮೇಲೆ ಮತ್ತು ಹಿಂದಿನ ವರ್ಷಗಳಲ್ಲಿ ಹೆಚ್ಚಿನ ಪ್ರಸ್ತಾವನೆಗಳು ಬಂದಿರುವ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾವಾರು ಗುರಿಯನ್ನು ನಿಗದಿಪಡಿಸಲಾಗಿದೆ.